ಜನಪದ ವಾಸ್ತು -
ನಾಗರಿಕ ಸಮಾಜಗಳಲ್ಲಿ ವಿಶಿಷ್ಟವಾಗಿ ಕಂಡು ಬರುವ ಸಾಮಾಜಿಕ, ರಾಜಕೀಯ, ಔದ್ಯಮಿಕ ಸಂಸ್ಥೆಗಳು, ಸಂಪತ್ತು ಕೇಂದ್ರಿಕೃತವಾಗಿರುವ ಕೆಲವು ವರ್ಗಗಳು ವ್ಯವಹಾರ ಕ್ಲಿಷ್ಟತೆ, ವಿವಿಧ ಅವಶ್ಯಕತೆಗಳು ಮುಂತಾದ ಕಾರಣಗಳಿಂದಾಗಿ ರೂಪಿಸಿಕೊಂಡಿರುವ ವಾಸ್ತುನಿರ್ಮಾಣಗಳು ದೊಡ್ಡವಾಗಿಯೂ ವೈವಿಧ್ಯಮಯವಾಗಿಯೂ ಕಲಾತ್ಮಕವಾಗಿಯೂ ಇರುತ್ತವೆಯಾಗಿ, ಇವುಗಳ ಪರಿಚಯವಿರುವ ಆಧುನಿಕ ಯುಗದಲ್ಲಿ ವಾಸ್ತು ಎಂಬ ಪದವನ್ನು ಇಂಥ ವಿಶಿಷ್ಟ ರೀತಿಯ ಕೃತಿಗಳೇ ಬಳಸುವುದು ರೂಢಿಯಾಗಿದೆ. ನಾಗರಿಕ ಸಮಾಜದಿಂದ ಭಿನ್ನವಾಗಿರುವ ಸರಳವಾದ ಜನಪದ ಸಮಾಜಗಳಲ್ಲಿ ವಿಶಿಷ್ಟ ವಾಸ್ತುರಚನೆಗಳಿಗೆ ಅವಶ್ಯಕವಾದ ಸಂಪನ್ಮೂಲಗಳಾಗಲೀ ಅಗತ್ಯಗಳಾಗಲೀ ಇಲ್ಲದಿರುವುದರಿಂದ, ಇಲ್ಲಿಯ ಸಾಮಾನ್ಯ ರಚನೆಗಳನ್ನು ಮೇಲಿನ ಅರ್ಥದಲ್ಲಿ ವಾಸ್ತುಕೃತಿಗಳು ಎಂದು ಹೆಸರಿಸುವುದು ಅಷ್ಟು ಸಾಧುವಾಗಿ ಕಾಣುವುದಿಲ್ಲ. ಜನಪದ ನಿರ್ಮಾಣಗಳು ಬಹುಮಟ್ಟಿಗೆ ಬಿಸಿಲು ಮಳೆಯಿಂದ ರಕ್ಷಣೆಯೊದಗಿಸುವ ಆವರಣಗಳು, ಅಷ್ಟೇ. ಜೋಪಡಿ, ಗುಡಿಸಲು ಮುಂತಾದವನ್ನು ಕಟ್ಟಡಗಳೆಂದು ಹೆಸರಿಸುವುದೂ ಇಂದು ಆ ಪದಕ್ಕೆ ರೂಢಿತವಾಗಿರುವ ಅರ್ಥದ ದೃಷ್ಟಿಯಿಂದ ತಪ್ಪಾದೀತೇನೋ. ಹೀಗಿದ್ದರೂ ಜನಪದ ಆವರಣ ನಿರ್ಮಾಣಗಳನ್ನೆಲ್ಲ ಒಟ್ಟಾಗಿ ಹೇಳುವ ಯಾವುದೇ ಪದದ ಅಭಾವದಿಂದಾಗಿ ಇವನ್ನು ನಿರ್ದೇಶಿಸಲು ವಾಸ್ತು ಎಂಬ ಪದವನ್ನೇ ಬಳಸಲಾಗಿದೆ.

ಮೊದಲನೆಯದಾಗಿ ಜನಪದ ವಾಸ್ತುರಚನೆಗಳಲ್ಲಿ ಮುಖ್ಯವಾಗಿ ಕಂಡುಬರುವ ಒಂದು ಅಂಶ-ಅವುಗಳ ಸರಳತೆ. ಆರ್ಥಿಕ ಬಲದ ಅಭಾವ ಮತ್ತು ಸೀಮಿತ ಆವಶ್ಯಕತೆಗಳು ಆ ಸರಳತೆಗೆ ಕಾರಣಗಳು. ಹೆಚ್ಚು ಕಡಿಮೆ ಎಲ್ಲ ಜನಪದ ವಾಸ್ತು ನಿರ್ಮಾಣಗಳನ್ನೂ ಲೌಕಿಕ ಮತ್ತು ಧಾರ್ಮಿಕ ಎಂಬ ಎರಡು ಗುಂಪುಗಳಲ್ಲಿ ವಿಂಗಡಿಸಬಹುದು. ಲೌಕಿಕ ವಾಸ್ತು ಬಹುಮಟ್ಟಿಗೆ ಕುಟುಂಬಗಳ ವಾಸಗೃಹಗಳಿಗಷ್ಟೇ ಸೀಮಿತವಾಗಿರುತ್ತದೆ. ಅಪರೂಪವಾಗಿ ವಿನೋದಗೃಹಗಳು, ಗರಡಿಗಳು, ಹಲವು ಜನ ಕೂಡುವ ಚಾವಡಿಗಳೂ ಕಂಡುಬರುವುದುಂಟು. ದೇವಾಲಯಗಳು ಧಾರ್ಮಿಕ ರೀತಿಯ ವಾಸ್ತುಗಳು. ಇವುಗಳ ಸಂಖ್ಯೆ ಬಹು ಕಡಿಮೆ. ನಾಗರಿಕ ಸಮಾಜದ ಪ್ರಭಾವ ಕಡಿಮೆ ಇರುವ ಜನಪದ ಗ್ರಾಮಗಳಲ್ಲಿ ಒಂದೋ ಎರಡೋ ಇದ್ದರೆ ಹೆಚ್ಚು. ಹೆಚ್ಚು ಬಾರಿ, ಮರ, ನದೀ ದಡ, ಬಯಲುಗಳೇ ಪೂಜಾಸ್ಥಾನಗಳಾಗಿದ್ದು ಕೆಲವು ಗ್ರಾಮಗಳಲ್ಲಿ ದೇವಾಲಯಗಳು ಇಲ್ಲದಿರುವುದೂ ಉಂಟು. ಎಷ್ಟೋ ವೇಳೆ ಮೂರು ಪಕ್ಕಗಳಲ್ಲಿ ಮೂರು ಕಲ್ಲು ನೆಟ್ಟು ಅದರ ತಲೆಯ ಮೇಲೆ ಒಂದು ಚಪ್ಪಡಿ ಎಳೆದು ಅದನ್ನೇ ಗುಡಿ ಎಂದು ಬಳಸುವುದೂ ಉಂಟು. ಕಲ್ಲುಗುಂಡು ಮಾರಿ ಆಗಬಹುದಾದರೆ ಇದು ಅದರ ದೇಗುಲವಾಗುವುದರಲ್ಲಿ ಯಾವ ಅಚ್ಚರಿಯೂ ಕಾಣದು. ಒಂದೇ ದೇವಾಲಯ ಹಲವು ಗ್ರಾಮಗಳ ಧಾರ್ಮಿಕ ಆವಶ್ಯಕತೆಯನ್ನು ಪೂರೈಸುವುದೂ ಅಪರೂಪವಲ್ಲ. ಕೆಲವು ಸಂದರ್ಭಗಳಲ್ಲಿ ಈ ದೇವಾಲಯಗಳೇ ನ್ಯಾಯ ತೀರ್ಮಾನ, ಮನರಂಜನೆ ಮುಂತಾದ ಲೌಕಿಕ ವ್ಯವಹಾರಗಳಿಗೂ ಉಪಯೋಗವಾಗುತ್ತವೆ. ಒಟ್ಟಿನಲ್ಲಿ ಹೇಳುವುದಾದರೆ ಜನಪದ ವಾಸ್ತು ನಿರ್ಮಾಣಗಳು ಜನರ ನಿತ್ಯ ಜೀವನದ ಕನಿಷ್ಠ ಆವಶ್ಯಕತೆಗಳಿಗಷ್ಟೇ ಸೀಮಿತವಾಗಿರುತ್ತವೆ. ಶ್ರೀಮಂತಿಕೆ ಇಲ್ಲಿಲ್ಲ. ಆದ್ದರಿಂದ ಸಹಜವಾಗಿ ಈ ನಿರ್ಮಾಣಗಳು ಚಿಕ್ಕವಾಗಿಯೂ ವೈವಿಧ್ಯರಹಿತವಾಗಿಯೂ ಇರುತ್ತವೆ. ಮಹಡಿಮನೆ, ವಾಡೆ, ಗುತ್ತಿನ ಮನೆ ಇದಕ್ಕೆ ಅಪವಾದ.

ಪರಿಸರದ ಗಾಢಪ್ರಭಾವ, ಜನಪದ ವಾಸ್ತುರಚನೆಗಳಲ್ಲಿ ಎದ್ದುಕಾಣುವ ಎರಡನೆಯ ಮುಖ್ಯ ಅಂಶ. ಇದನ್ನು ರಚನೆಗೆ ಉಪಯೋಗಿಸುವ ವಸ್ತುಗಳಲ್ಲೂ ಮತ್ತು ರಚನೆಯ ಆಕಾರದಲ್ಲೂ ಕಾಣಬಹುದು. ನಿರ್ಮಾಪಕರು ಆ ಸ್ಥಳದಲ್ಲಿ ಸುಲಭವಾಗಿ ಸಿಕ್ಕುವ ತುಟ್ಟಿಯಲ್ಲದ ವಸ್ತುಗಳನ್ನಷ್ಟೇ ಆರಿಸಿಕೊಂಡಿರುತ್ತಾರೆ. ಉದಾಹರಣೆಗೆ ಮಣ್ಣು ವಿಶೇಷವಾಗಿ ಉಪಯೋಗವಾಗಿರುವ ವಸ್ತು. ಜೊತೆಗೆ ಕಲ್ಲಿನ ಸೀಮೆಯಲ್ಲಿ ಕಲ್ಲು, ಕಾಡುಪ್ರದೇಶಗಳಲ್ಲಿ ಮರ, ಬಿದಿರು, ಸೊಪ್ಪು, ಗರಿ, ಬಯಲು ನಾಡಿನಲ್ಲಿ ಹುಲ್ಲು, ಶೀತಪ್ರದೇಶದಲ್ಲಿ ಮಂಜುಗಡ್ಡೆ ಮುಂತಾದವುಗಳಲ್ಲಿ ಕಟ್ಟಿದ ಕಟ್ಟಡಗಳು ಕಂಡಬರುತ್ತವೆ. ಚೂಪುಚಾವಣಿ, ಇಪ್ಪಾರು, ಒಪ್ಪಾರು, ಅರ್ಧ ಗೋಲ, ಪೀಪಾಯಿ ಇತ್ಯಾದಿ ಇಳಿಜಾರಿರುವ ನಿರ್ಮಾಣಗಳು, ಮಂಜು, ಮಳೆ ಇರುವ ಪ್ರದೇಶಗಳಲ್ಲಿದ್ದರೆ, ಮಳೆ ಬಹು ಕಡಿಮೆ ಇರುವ ಪ್ರದೇಶಗಳಲ್ಲಿ ಮಟ್ಟವಾದ ಮಣ್ಣಿನ ಮಾಳಿಗೆ ಮನೆಗಳಿರುತ್ತವೆ. (ನೋಡಿ- ಗೃಹ)

ತೀರ ಕನಿಷ್ಟ ಅಲಂಕರಣ ಜನಪದ ವಾಸ್ತುಕೃತಿಗಳಲ್ಲಿ ಕಾಣುವ ಮೂರನೆಯ ಅಂಶ. ಹೆಚ್ಚಿನವುಗಳಲ್ಲಿ ಅಲಂಕರಣದ ದೃಷ್ಟಿಯೇ ಇರುವುದಿಲ್ಲ. ಪಟೀಲ ಶ್ರೀಮಂತರ ಮನೆಗಳಲ್ಲಿ.

ನಾಲ್ಕನೆಯದಾಗಿ ಈ ಕಟ್ಟಡಗಳು ಚಿರಕಾಲ ಸ್ಥಿರವಾಗಿ ಉಳಿಯಲೆಂದು ಕಟ್ಟಿದವುಗಳಲ್ಲ. ಇವನ್ನು ಆಗಿಂದಾಗ್ಗೆ ನವೀಕರಿಸುವುದು ಅಥವಾ ಹೊಸವನ್ನೇ ನಿರ್ಮಿಸುವುದೇ ಬಹುಸಾಮಾನ್ಯ.

ಈ ಅಂಶಗಳನ್ನು ವಿಶ್ವದ ನಾನಾಕಡೆಗಳಲ್ಲಿ ಕಂಡುಬರುವ ಕೃತಿಗಳಲ್ಲಿ ಗಮನಿಸಬಹುದು. ಉತ್ತರ ಅಮೇರಿಕ ಖಂಡದ ಅಲಾಸ್ಕ, ಕೆನಡದ ಉತ್ತರಭಾಗ ಮುಂತಾದ ಶೀತಪ್ರದೇಶಗಳಲ್ಲಿ ವಾಸಿಸುವ ಎಸ್ಕಿಮೋ ಜನ ತಮ್ಮ ನಿವಾಸಗಳಿಗೆ ಗಟ್ಟಿಯಾದ ದಪ್ಪ ಮಂಜಿನಗಡ್ಡೆಗಳನ್ನೇ ಉಪಯೋಗಿಸುತ್ತಾರೆ. ಅಂಥ ಗಡ್ಡೆಗಳನ್ನು ಸೈಜು ಕಲ್ಲಿನ ರೀತಿಯಲ್ಲಿ ಹೆರೆದು ಒಂದರ ಮೇಲೊಂದು ಪೇರಿಸಿ, ಅರ್ಧಗೋಲಾಕಾರದಲ್ಲಿ ನಿರ್ಮಿಸಿದ ಮನೆಗಳು (ಇಗ್ಲೂ) ಇಲ್ಲಿಯ ವೈಶಿಷ್ಟ್ಯ. ಮಳೆ ಕಡಿಮೆ ಇರುವ ನ್ಯೂ ಮೆಕ್ಸಿಕೋ ಪ್ರದೇಶದಲ್ಲಿ ಮಣ್ಣಿನಲ್ಲಿ ಕಟ್ಟಿದ ಆಯಾಕಾರದ ಗೋಡೆಗಳು, ಮತ್ತು ತೊಲೆಗಳ ಮೇಲೆ ಕಡ್ಡಿ, ಗರಿಗಳನ್ನು ಇಟ್ಟು ಮಣ್ಣು ಹರವಿದ ಮಟ್ಟ ಚಾವಣಿಯ ಮಾಳಿಗೆಯ ಮನೆಗಳನ್ನು ಗುಂಪುಗುಂಪಾಗಿ ಹಲವು ಅಂತಸ್ತುಗಳಲ್ಲಿರುವಂತೆ ಕಟ್ಟಲಾಗಿರುತ್ತದೆ. ನೈಋತ್ಯ ಅಮೆರಿಕದಲ್ಲಿ ದಪ್ಪ ಮರದ ದಿಮ್ಮಿಗಳನ್ನು ಒಂದರ ಮೇಲೊಂದು ಜೋಡಿಸಿ, ಮೇಲೂ ಅಡ್ಡಡ್ಡವಾಗಿ ಹಾಸಿ, ಮಣ್ಣನ್ನು ಹರವಿ ಮಾಡಿದ ಮನೆಗಳೂ ಮೆಕ್ಸಿಕೋದ ಎತ್ತರದ ಬಯಲುನಾಡಿನಲ್ಲಿ, ವೃತ್ತಾಕಾರದ ಕಲ್ಲಿನ ಗೋಡೆ, ಮೇಲೆ ಛತ್ರಿಯಾಕಾರದ ಹುಲ್ಲು ಮುಚ್ಚಿದ ಚಾವಣಿ ಇರುವ ಮನೆಗಳು ಕಂಡುಬರುತ್ತವೆ. ಇರಾಕಾಯಿಸ್ ಜನಾಂಗದವರ ಮನೆಗಳು ವಿಶಿಷ್ಟ ರೀತಿಯವು. ಇವು ಹಲವು ಕುಟುಂಬಗಳು ಒಟ್ಟಿಗೆ ವಾಸಿಸಲು ಆಗುವಂಥ ಗೃಹಗಳು. ತಳವಿನ್ಯಾಸ ಚೌಕವಾಗಿದ್ದು ಮೇಲೆ ಅರೆಪೀಪಾಯಿಯಾಕೃತಿಯ (ಕಮಾನು) ಮುಚ್ಚನೆ ಇರುತ್ತದೆ. ನಿರ್ಮಾಣದಲ್ಲಿ ಅಗಲವಾದ ತೊಗಟೆಯ ತುಂಡುಗಳನ್ನು ಹಂದರದ ಮೇಲೆ ಹರವಿ ಗಣೆಗಳಿಂದ ಭದ್ರಪಡಿಸಿರುತ್ತಾರೆ.

ದಕ್ಷಿಣ ಅಮೆರಿಕದ ಪೆರುವಿನಲ್ಲಿ ದಬ್ಬೆಗಳ ಹಂದರದ ಮೇಲೆ ಗರಿಗಳನ್ನು ಹೊದಿಸಿ ಮಾಡಿದ ಶಂಕು ತಲೆಯಾಕಾರದ ಗುಡಿಸಲುಗಳು, ಫ್ರೆಂಚ್ ಗಯಾನಾದ ಬಯಪೂಕ್ ನದೀ ಪ್ರದೇಶದಲ್ಲಿ ಆಯಾಕರದ ವಿನ್ಯಾಸದ ಮೇಲೆ, ಇಪ್ಪಾರು ಚಾವಣಿ ಇರುವ, ದಬ್ಬೆ ಗರಿಗಳಿಂದ ಮಾಡಿದ ಗುಡಿಸಲುಗಳೂ ಕಂಡುಬರುತ್ತವೆ. ಈ ಎರಡನೆಯವು ಅನೇಕ ಗೂಟಗಳ ಮೇಲೆ ಎತ್ತಿದ ಅಟ್ಟಣೆಯ ಮೇಲೆ ಕಟ್ಟಿದವುಗಳಾಗಿರುತ್ತವೆ. ಬ್ರೆಜಿಲ್‍ನ ಅಮೆಜಾನ್ ನದೀಪ್ರದೇಶದಲ್ಲೂ ಅಟ್ಟದ ಮೇಲೆ ಕಟ್ಟಿದ ಮನೆಗಳೇ ಹೆಚ್ಚಾಗಿ ಕಾಣುತ್ತವೆ. ಅನೇಕ ಬಾರಿ ನೀರಿನ ಮೇಲೆ ಇಂಥ ಅಟ್ಟಣೆಗುಡಿಸಲುಗಳನ್ನು ನಿರ್ಮಿಸುವುದುಂಟು. ಕೆಲವೆಡೆ ಅಟ್ಟಣೆಯ ಮೇಲೆ ಅರೆಪೀಪಾಯಿಯಾಕೃತಿಯ ಚಾವಣಿ ಇರುತ್ತದೆ.

ಮಳೆ ಕಡಿಮೆ ಇರುವ ಆಫ್ರಿಕದ ಸಹರಾ ಮರುಭೂಮಿಯಲ್ಲಿ ಮಣ್ಣಿನ ಮನೆಗಳು ಸಾಮಾನ್ಯ. ಅವು ಚೌಕ ಅಥವಾ ಆಯಾಕಾರವಾಗಿದ್ದು, ಮೇಲೆ ಮಟ್ಟವಾದ ಮಣ್ಣಿನ ಮಾಳಿಗೆ ಇರುತ್ತದೆ. ಮರಳುಗಾಡಿನಲ್ಲಿ ದೂಳು ಮರಳಿನಿಂದ ಕೂಡಿದ ಬಿರುಗಾಳಿ ಆಗಾಗ ಬೀಸುವುದರಿಂದ, ಮನೆಗಳಿಗೆ ಕಿಟಕಿಗಳು ಇರುವುದಿಲ್ಲ. ಬಾಗಿಲೂ ಬಹುಚಿಕ್ಕದಾಗಿರುತ್ತದೆ. ಹಲವು ಮನೆಗಳು ದೊಡ್ಡ ಮಣ್ಣುಗೋಡೆಯಿಂದ ಆವೃತವಾಗಿರುವುದೂ ಉಂಟು. ಕ್ಯಾಮರೂನ್ ಪ್ರಾಂತ್ಯ ಮುಂತಾದೆಡೆಗಳಲ್ಲಿ ಬರಿಯ ಮಣ್ಣಿನಿಂದಲೇ ಶಂಕು ತಲೆ ಅಥವಾ ಚೂಪುತಲೆಯ ಅರ್ಧಗೋಳದಾಕಾರದಲ್ಲಿ ಮನೆಗಳನ್ನು ನಿರ್ಮಿಸಿ ಚಿಕ್ಕಬಾಗಿಲನ್ನು ಕೊರೆಯುವ ರೂಢಿ ಇದೆ. ಸಹರಾದಿಂದ ದಕ್ಷಿಣಕ್ಕೆ ತೆರಳಿದಂತೆ ಮಳೆ ಹೆಚ್ಚಾಗುವುದರಿಂದ ಅಲ್ಲೆಲ್ಲ ಇಳಿಜಾರು ಚಾವಣಿಯ ಮನೆಗಳೇ ಕಂಡುಬರುತ್ತವೆ. ಇವುಗಳಲ್ಲಿ ಎರಡು ಮುಖ್ಯ ವಿಧಗಳಿವೆ. ಮೊದಲನೆಯದರ ತಳವಿನ್ಯಾಸ-ವೃತ್ತ. ಎಡನೆಯದರದು-ಆಯ. ವೃತ್ತಾಕಾರದ ಮನೆಗಳ ಗೋಡೆ ಸಾಮಾನ್ಯವಾಗಿ ಮಣ್ಣಿನವು ಚಾವಣಿ ಛತ್ರಿಯಾಕಾರದ್ದು, ಮರದ ರೆಂಬೆ ಅಥವಾ ಬಿದಿರುಕಡ್ಡಿಗಳನ್ನು ಗೋಡೆಗಳ ಮೇಲೆ ಇಳಿಜಾರಾಗಿ ಜೋಡಿಸಿ, ತಲೆಭಾಗದಲ್ಲಿ ಒಟ್ಟಿಗೆ ಸೇರಿಸಿ ಕಟ್ಟಿ, ಮೇಲೆ ಹುಲ್ಲು ಅಥವಾ ಜೋಂಡನ್ನು ಮುಚ್ಚಿರುತ್ತಾರೆ. ಕೆಲವು ಕಡೆ ಜೊಂಡು, ಬಿದಿರು ಅಥವಾ ಲಾಳಿಕಡ್ಡಿಯನ್ನು ಹೆಣೆದು ಮಾಡಿದ ತಡಿಕೆಗಳನ್ನು ಮಣ್ಣಿನ ಗೋಡೆಗಳಿಗೆ ಬದಲಾಗಿ ಉಪಯೋಗಿಸುವ ಪದ್ಧತಿ ಇದೆ. ಐವರಿ ಕೋಸ್ಟಿನ ಮತ್ತು ದಕ್ಷಿಣ ಆಫ್ರಿಕದ ಕೇರ್ಪ ಪ್ರಾಂತ್ಯದ ಮನೆಗಳು ಇವಕ್ಕೆ ಒಳ್ಳೆಯ ಉದಾಹರಣೆಗಳು. ಆಯಾಕಾರದ ಮನೆಗಳಿಗೆ ಮಣ್ಣಿನ ಗೋಡೆಗಳೂ ಹಲವು ಸಲ ಬಿದಿರು ಅಥವಾ ಕಡ್ಡಿಗಳ ಹಂದರದ ಮೇಲೆ ಜೊಂಡು, ಹುಲ್ಲು ಕಟ್ಟಿ ಮಾಡಿದ ಗೋಡೆಗಳೂ ಇರುತ್ತವೆ. ಚಾವಣಿ ಸಾಮಾನ್ಯವಾಗಿ ಕಡ್ಡಿ ಅಥವಾ ಬಿದಿರಿನ ಹಂದರದ ಮೇಲೆ ಹುಲ್ಲು ಇಲ್ಲವೆ ಗರಿಗಳನ್ನು ಕಟ್ಟಿ ಮಾಡಿದವು. ಇವು ಇಪ್ಪಾರಾಗಿರುತ್ತವೆ. ಚೌಗು ಪ್ರದೇಶವಿರುವ ಹೋಮೀ ರಾಜ್ಯದ ಹಲವು ಭಾಗ ಮೊದಲಾದೆಡೆಗಳಲ್ಲಿ, ಅನೇಕ ಕಂಬಗಳನ್ನು ನೆಟ್ಟು, ಅಟ್ಟಣೆ ಕಟ್ಟಿ, ಅದರ ಮೇಲೇ ಕಟ್ಟಡ ರಚಿಸುವ ರೂಢಿ ಇದೆ. ಇವುಗಳಿಗೆ ಮರ, ಬಿದಿರು, ಜೋಂಡು, ಹುಲ್ಲುಗಳನ್ನು ಮಾತ್ರ ಬಳಸಲಾಗುತ್ತದೆ.

ಉತ್ತರ ಯೂರೋಪಿನ ಸ್ಕಾಂಡಿನೇಮಿಯ ಮುಂತಾದ ಚಳಿ ಪ್ರದೇಶಗಳಲ್ಲಿ ಗಣೆಗಳ ಮೇಲೆ ಚರ್ಮ ಹೊದಿಸಿದ ಶಂಕುತಲೆಯಾಕೃತಿಯ ಗುಡಾರಗಳು ಅಲ್ಲಿಯ ಜನಸಾಮಾನ್ಯರ ರಚನೆಗಳಾಗಿರುತ್ತವೆ. ಯೂರೋಪಿನ ಶೀತವಲಯದಲ್ಲೂ ಎಸ್ಕಿಮೋ ಜನ ಅಲಾಸ್ಕ ಮುಂತಾದೆಡೆಗಳಿಂದ ಇಗ್ಲೂಗಳನ್ನು ನಿರ್ಮಿಸುತ್ತಾರೆ. 

ಉಷ್ಣಾಂಶ ಅಧಿಕವಾಗಿದ್ದು ಹೆಚ್ಚು ಮಳೆ ಇಲ್ಲದ ಮೆಡಿಟರೇನಿಯನ್ ಕರಾವಳಿ ಮತ್ತು ಸುತ್ತಲಿನ ಪ್ರದೇಶದಲ್ಲಿ ಮಣ್ಣು ಅಥವಾ ಕಲ್ಲನ್ನು ಉಪಯೋಗಿಸಿ ಕಟ್ಟಿದ ಆಯಾಕಾರದ ಮಟ್ಟ ಚಾವಣಿಯ ಮಾಳಿಗೆ ಮನೆಗಳೂ, ಇಟಲಿಯ ಕೆಲವು ಭಾಗಗಳಲ್ಲಿ ಭಾರತದ ರೀತಿಯ ನಾಡು ಹೆಂಚಿನ ಚಾವಣಿಯ ಮನೆಗಳೂ ಇವೆ.

ಏಷ್ಯದ ಉತ್ತರದ ಸೈಬೀರಿಯ ತೀರಪ್ರದೇಶಗಳಲ್ಲೂ ಯೂರೋಪಿನ ಶೀತ ಪ್ರದೇಶಗಳಲ್ಲಿರುವಂಥ ಶಂಕುತಲೆಯಾಕೃತಿಯ ಚರ್ಮ ಹೊದಿಸಿದ ಗುಡಾರಗಳು ಕಂಡುಬರುತ್ತವೆ. ದಕ್ಷಿಣಕ್ಕೆ ಬರುತ್ತ ಉತ್ತರ ಮಂಗೊಲಿಯಾದಲ್ಲಿ ಚರ್ಮಕ್ಕೆ ಬದಲು ಫೆಲ್ಟ್ ಅನ್ನು, ಬೈಕಾಲ್ ಪ್ರದೇಶದಲ್ಲಿ ಚಳಿಗಾಲದಲ್ಲಿ ಚರ್ಮವನ್ನು, ಬೇಸಗೆಯಲ್ಲಿ ತೊಗಟೆಗಳನ್ನು ಮೇಲಿನ ರೀತಿಯ ಗುಡಾರಗಳಿಗೆ ಹೊದಿಸುವ ಪದ್ಧತಿ ಇದೆ. ಸಿರಿಯದ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಶಂಕುತಲೆ ಅಥವಾ ಅರ್ಧಗೋಳಾಕೃತಿಯ, ಪೂರ್ಣವಾಗಿ ಮಣ್ಣಿನಲ್ಲೇ ರೂಪಿಸಿದ ಮನೆಗಳಿವೆ. ಆಗ್ನೇಯ ಏಷ್ಯದಲ್ಲಿ ಬೊಂಬು ಹಂದರದ ಮೇಲೆ ಗರಿಗಳನ್ನು ಮುಚ್ಚಿದ, ಅಥವಾ ಬಿದಿರು ತಟ್ಟಿಗೆ ಗೋಡೆಗಳುಳ್ಳ ಆಯಾಕಾರದ ರಚನೆಗಳು ವಿಶೇಷವಾಗಿ ಕಾಣಬರುತ್ತವೆ. ಇವುಗಳ ಚಾವಣಿ ಇಪ್ಪಾರು ರೀತಿಯದು. ಇವಕ್ಕೂ ಗಳುವಿನ ಹಂದರದ ಮೇಲೆ ಗರಿಗಳನ್ನು ಹೊದಿಸಲಾಗಿರುತ್ತದೆ. ಫಿಲಿಪೀನ್ಸ್ ಮತ್ತು ಉತ್ತರ ವಿಯಟ್ನಾಂ ಜೌಗು ಪ್ರದೇಶಗಳಲ್ಲಿ ಹಲವು ಕಂಬಗಳಿಂದ ಎತ್ತಿದ ಅಟ್ಟಣೆಯ ಮೇಲೆ ಮನೆಗಳಿರುತ್ತವೆ. ಇವುಗಳ ರಚನೆ ಮೇಲಿನಂತೆಯೇ. ಆದರೆ ನಾಲ್ಕು ಹಾರಿನ ಚಾವಣಿಗಳೂ ಇರುವುದುಂಟು. ಬೋರ್ನಿಯೋ ದ್ವೀಪದಲ್ಲೂ ಇದೇ ರೀತಿಯ ರಚನೆಗಳಿವೆ. ಆದರೆ ಇಲ್ಲಿಯವು ಮೇಲಿನವಂತೆ ಏಕಕುಂಟುಂಬ ಗೃಹಗಳಾಗಿರದೆ, ಹಲವು ಕುಟುಂಬಗಳು (ಒಂದು ಗ್ರಾಮವೇ) ಒಟ್ಟಿಗೆ ವಾಸಿಸುವಂಥ ವ್ಯವಸ್ಥೆ ಆಗಿರುತ್ತದೆ. ಹಲವು ಗೂಟಗಳ ಮೇಲೆ ಎತ್ತಿದ ಆಯಾಕಾರದ ಅಟ್ಟಣೆಯ ಮೇಲೆ ಕಟ್ಟಿದ ಇಂಥ ಸಮೂಹ ವಾಸಗೃಹಗಳಲ್ಲಿ ಮುಂದುಗಡೆ, ತೆರೆದ ಒಂದು ದೊಡ್ಡ ಮೊಗಸಾಲೆಯಿದ್ದು, ಹಿಂದಿನ ಭಾಗದಲ್ಲಿ ಅನೇಕ ಕೋಣೆಗಳ ಸಾಲು ಇರುತ್ತದೆ. ಒಂದೊಂದು ಕೋಣೆಯೂ ಒಂದೊಂದು ಕುಟುಂಬಕ್ಕೆ ಮೀಸಲಾಗಿರುತ್ತದೆ. ನ್ಯೂ ಗಿನಿ ದ್ವೀಪದ ಕರಾವಳಿಯಲ್ಲೂ ಸುಮಾರು ಇದೇ ರೀತಿಯ ಅಟ್ಟಣೆ ಗೃಹಗಳನ್ನು ಕಟ್ಟುವ ರೂಢಿ ಇದೆ. ಇಂಥ ಒಂದೆರಡು ರಚನೆಗಳು ಕೆಲವು ವೇಳೆ ಗಂಡಸರ ವಿನೋದಕ್ಕೆ ಅಥವಾ ಧಾರ್ಮಿಕ ಆಚರಣೆಗಳಿಗೆ ಉಪಯೋಗವಾಗುತ್ತವೆ. ನ್ಯೂ ಗಿನಿಯ ಒಳನಾಡಿನಲ್ಲಿ ಅದೇ ಗೋಳಾಕಾರದ ಹುಲ್ಲುಚಾವಣಿ ಹೊದಿಸಿದ ವೃತ್ತಾಕಾರದ ಕುಳ್ಳು ಗುಡಿಸಲುಗಳು ಕಂಡುಬರುತ್ತವೆ. ಮೆಲನೇಷಿಯದಲ್ಲಿ ಬಂಬುಗಳನ್ನು ಒಂದರಮೇಲೊಂದರಂತೆ ಉದ್ದುದ್ದವಾಗಿ ಜೋಡಿಸಿ ಮಾಡಿದ ಕುಳ್ಳುಗೋಡೆಗಳ ಮೇಲೆ, ಗರಿಗಳಿಂದ ಮುಚ್ಚಿದ ಇಪ್ಪಾರು ಚಾವಣಿಯ ಆಯಾಕಾರದ ಗುಡಿಸಲುಗಳಿದ್ದರೆ, ಪಾಲಿನೇಷಿಯದ ಸಮೋಅ ಮುಂತಾದೆಡೆ ವೃತ್ತಾಕಾರದ ಕಲ್ಲಿನ ಅಡಿಪಾಯದಲ್ಲಿ ಕಂಬಗಳನ್ನು ನೆಟ್ಟು ಮೇಲೆ ಶಂಕುತಲೆ ಆಕಾರದ ಹುಲ್ಲಿನ ಚಾವಣಿಯನ್ನು ಹೊದಿಸಿರುವ ಗುಡಿಸಲುಗಳು ಕಂಡುಬರುತ್ತವೆ. ಪಾಲಿನೇಷಿಯದ ಹೂರ್ನ್ ದ್ವೀಪದ ಮನೆಗಳು ಮರದ ದಿಮ್ಮಿಗಳಿಂದ ಮಾಡಿದವು. ದಿಮ್ಮಿಗಳನ್ನು ಒಂದರ ಮೇಲೊಂದು ಪೇರಿಸಿ ಸುಮಾರು ಅರ್ಧವೃತ್ತಾಕಾರದ ಗೋಡೆಗಳಾಗಿ ಮಾಡಿ, ಮೇಲೆ ಇಪ್ಪಾರು ಅಥವಾ ಮುಪ್ಪಾರಿನ ಗರಿಗಳಿಂದ ಮುಚ್ಚುವುದು ಇಲ್ಲಿಯ ಪದ್ಧತಿ. ಪಾಲಿನೇಷಿಯದ ಸೊಸೈಟಿ ದ್ವೀಪಗಳಲ್ಲಿ ನೀರಿನ ಮೇಲೆ ಅಟ್ಟಣೆಗಳನ್ನು ಕಟ್ಟಿ ಅದರ ಮೇಲೆ ತೆಂಗಿನ ಹುರಿಯನ್ನು ಹೆಣೆದು ಮಾಡಿದ ತೆರೆಗೋಡೆಗಳು ಮತ್ತು ಮೇಲೆ ನಾಲ್ಕು ಹಾರಿನ ಗರಿಚಾವಣಿ ಇರುವ ಆಯಾಕರದ ಸುಂದರ ಗುಡಿಸಲುಗಳನ್ನು ಕಾಣಬಹುದು.
ಭಾರತದ ಜನಪದ ವಾಸ್ತುರಚನೆಗಳಲ್ಲೂ ಹಲವಾರು ಪರಿಸರ ನಿರ್ಧರಿತವಾದ ವೈಶಿಷ್ಟ್ಯ, ವೈವಿಧ್ಯಗಳನ್ನು ಗಮನಿಸಬಹುದು. ಕಾಶ್ಮೀರ, ಹಿಮಾಚಲ ಪ್ರದೇಶ ಮುಂತಾದ ಹಿಮಾಲಯದ ತಪ್ಪಲು ಪ್ರದೇಶದಲ್ಲಿನ ಹಳೆಯ ರೀತಿಯ ಗ್ರಾಮೀಣ ಕಟ್ಟಡಗಳು ವಿಶೇಷವಾಗಿ ಕಲ್ಲು ಮತ್ತು ಮರದಿಂದ ಆದವು. ಇಲ್ಲಿ ಆಯಾಕಾರದ ಗೃಹಗಳು ಸಾಮಾನ್ಯ. ಮರ ಹೆಚ್ಚಾಗಿ ದೊರೆಯುವ ಕಾಶ್ಮೀರ ಮುಂತಾದೆಡೆಗಳಲ್ಲಿ ಮೊದಲು ಮರದ ತೊಲೆಗಳನ್ನು ಉಪಯೋಗಿಸಿ, ಗೃಹದ ಚೌಕಟ್ಟನ್ನು ನಿರ್ಮಿಸುತ್ತಾರೆ. ಗೋಡೆಗಳಿಗೆ ನೆಟ್ಟಗೆ ಕಂಬಗಳನ್ನು ಕೂಡಿಸುವ ಅಡ್ಡ ತೊಲೆಗಳನ್ನು 3'-4' ಅಂತರದಲ್ಲಿ ಜೋಡಿಸಿ ಮಧ್ಯದ ಖಾಲಿಜಾಗಗಳನ್ನು ಮಣ್ಣು ಅಥವಾ ಇಟ್ಟಿಗೆಯಿಂದ ತುಂಬುತ್ತಾರೆ. ಚಾವಣಿ ಸಾಮಾನ್ಯವಾಗಿ ಮರದ ಹಲಗೆಯದು. ಕೆಲವು ಕಡೆ ತೆಳು ಚಪ್ಪಡಿಗಳನ್ನು ಒಂದರ ಮೇಲೆ ಒಂದರಂತೆ ಇಳಿಜಾರು ಮರದ ಹಂದರದ ಮೇಲೆ ಕೂಡಿಸಿ ಮಾಡಿದ ಚಾವಣಿಗಳೂ ಉಂಟು. ಹಿಮಾಚಲ ಪ್ರದೇಶದ ಗ್ರಾಮಗಳಲ್ಲಿ ಎರಡಂತಸ್ತಿನ ಮನೆಗಳು ಸಾಮಾನ್ಯ ಇವುಗಳ ರಚನಾತಂತ್ರ ಮೇಲಿನ ರೀತಿಯದೇ. ಕೆಳಗಿನ, ಅಂದರೆ ನೆಲಮಟ್ಟದ ಅಂತಸ್ತನ್ನು ದನ, ಮೇಕೆಗಳಿಗೂ ಮೇಲಿನ ಅಂತಸ್ತನ್ನು ಜನವಾಸಕ್ಕೂ ಉಪಯೋಗಿಸುತ್ತಾರೆ. ರಾಜಸ್ಥಾನದ ಮರಳುಗಾಡು ಪ್ರದೇಶ ಮತ್ತು ಮಳೆ ಕಡಿಮೆ ಬೀಳುವ ಪಂಜಾಬ್, ಉತ್ತರಪ್ರದೇಶ ಮತ್ತು ಗುಜರಾತಿನ ಭಾಗಗಳಲ್ಲಿ ಮಣ್ಣಿನ ಮಾಳಿಗೆಯ ಮನೆಗಳು ಕಂಡುಬರುತ್ತವೆ. ಇವುಗಳು ತಳವಿನ್ಯಾಸದಲ್ಲಿ ಆಯಾಕಾರದವು. ಮನೆಯ ಮುಂದೆ ಬಾಗಿಲಿನ ಇಕ್ಕೆಲಗಳಲ್ಲೂ ಕೂಡುವ ಜಗುಲಿ ಇರುತ್ತದೆ. ಮೇಲಿನ ಚಾವಣಿ ಮಟ್ಟವಾಗಿದ್ದು, ಜಂತಿಗಳ ಮೇಲೆ, ಕಡ್ಡಿ ಸೊಪ್ಪುಗಳನ್ನು ಇಟ್ಟು, ಅದರ ಮೇಲೆ ಮಣ್ಣು ಹರಡಿ ಮಾಡಿದವುಗಳಾಗಿರುತ್ತವೆ. ಕಿಟಕಿಗಳು ಅಪರೂಪ, ರಾಜಸ್ಥಾನದ ಮರಳುಗಾಡಿನಲ್ಲಿ ಬಿಸಿ ಹಾಗೂ ದೂಳುಮಯ ಗಾಳಿಯ ಹೊಡೆತವಿರುವುದರಿಂದ, ಅವನ್ನು ತಡೆಯಲು ಕಿಟಕಿಗಳನ್ನು ಇಡುವುದೇ ಇಲ್ಲ. ಮನೆಗಳು ಬೆಲ್ಲದಚ್ಚಿನಂತೆ ಬೋಳುಬೋಳಾಗಿರುತ್ತವೆ. ದ್ವಾರಗಳೂ ಬಹು ಚಿಕ್ಕವು. ಇಂಥ ಮನೆಗಳನ್ನು ಒತ್ತಾಗಿ ಕಟ್ಟಿ, ದ್ವಾರಗಳನ್ನು ಕಿರು ಓಣಿಯತ್ತ ತೆರೆದಿರುವುದು ರೂಢಿ. ಮಧ್ಯಪ್ರದೇಶದ ವಿಂಧ್ಯಶ್ರೇಣಿಯ ಭಾಗದಲ್ಲಿ ಮೇಲಿನ ರೀತಿಯ, ಆದರೆ, ಕಲ್ಲಿನಲ್ಲಿ ಕಟ್ಟಿದ ಮನೆಗಳು ಅಲ್ಲಲ್ಲಿ ಕಾಣಸಿಗುತ್ತವೆ. ಇಲ್ಲಿ ಆಯಾಕಾರದ ಮಣ್ಣುಗೋಡೆಗಳ ಮೇಲೆ, ಹುಲ್ಲು, ಸೊಪ್ಪಿನ ಇಪ್ಪಾರು ಚಾವಣಿಗಳನ್ನು ಏರಿಸಿರುವ ಮನೆಗಳು ಸಾಮಾನ್ಯ. ಚಾವಣಿಗೆ ನಾಡಹೆಂಚಿನ ಉಪಯೋಗವೂ ಉಂಟು. ವಿದರ್ಭ ಪ್ರದೇಶದಲ್ಲೂ ಇದೇ ರೀತಿಯ ಗೃಹನಿರ್ಮಾಣ ಕಂಡುಬರುತ್ತದೆ. ಆದರೆ ಮಳೆ ಕಡಿಮೆ ಇರುವ ಮಹಾರಾಷ್ಟ್ರದ ಪ್ರಸ್ಥಭೂಮಿಯಲ್ಲಿ ಮಟ್ಟಚಾವಣಿಯ ಮಣ್ಣಿನ ಮಾಳಿಗೆ ಮನೆಗಳು ರೂಢಿಯಲ್ಲಿವೆ. ಆಂಧ್ರಪ್ರದೇಶದ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲೂ ಇದೇ ರೀತಿಯ ಮನೆಗಳಿರುತ್ತವೆ. ಕೆಲವೆಡೆ ಚಾವಣಿಯನ್ನು ಕಡಪಕಲ್ಲು ಮುಂತಾದ ತೆಳುಚಪ್ಡಡಿಗಳಿಂದ ಮುಚ್ಚುವುದೂ, ಗೋಡೆಗಳಿಗೆ ಇಂಥದೇ ಕಲ್ಲುಚೂರುಗಳನ್ನು ಬಳಸುವುದೂ ಉಂಟು. ಆಂಧ್ರಪ್ರದೇಶದ ಕರಾವಳಿ ಪ್ರದೇಶದಲ್ಲಾದರೋ ಮಣ್ಣುಗೋಡೆಯ ಮೇಲೆ, ಮರದ ತುಂಡು ಅಥವಾ ಬಿದಿರಿನ ಹಂದರವನ್ನು ಎಬ್ಬಿಸಿ ಸೋಗೆ ಅಥವಾ ತಾಳೆ ಗರಿಯಿಂದ ಮುಚ್ಚಿದ ಇಪ್ಪಾರು ಚಾವಣಿಯ ಆಯಾಕಾರದ ತಳವಿನ್ಯಾಸದ ಮನೆಗಳನ್ನು ಕಟ್ಟುವ ಸಂಪ್ರದಾಯವಿದೆ. ಇದೇ ರೀತಿಯ ವಾಸಗೃಹಗಳು ತಮಿಳುನಾಡಿನಲ್ಲೂ ಸಾಮಾನ್ಯ. ಚಾವಣಿಗೆ ನಾಡ ಹೆಂಚನ್ನು ಬಳಸುವುದೂ ವಿಶೇಷವಾಗಿ ಕಾಣುತ್ತದೆ. ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿರುವ ಆದಿವಾಸಿ ತೋಡರ ಮನೆಗಳು ವಿಚಿತ್ರರೀತಿಯವು. ಇವು ತಳವಿನ್ಯಾಸದಲ್ಲಿ ಆಯಾಕಾರವಾಗಿರುತ್ತವೆ. ಆದರೆ ಮೇಲುಭಾಗ ಅರೆಪೀಪಾಯಿ (ಕಮಾನು) ಆಕೃತಿಯದು. ಒಳಭಾಗದಲ್ಲಿ ಒಂದೆರಡು ಕೋಣೆಗಳಂತೆ ವಿಭಾಗವಿರುತ್ತದೆ. ಬಿದಿರು ಮತ್ತು ಹುಲ್ಲು, ಕಟ್ಟಲು ಉಪಯೋಗಿಸುವ ಸಾಮಾನ್ಯವಸ್ತುಗಳು. ಕೇರಳದ ಬೆಟ್ಟ ಮತ್ತು ಕರಾವಳಿ ಪ್ರದೇಶಗಳಲ್ಲಿ ಹೆಚ್ಚು ಮಳೆ ಬೀಳುವುದರಿಂದ ಅಲ್ಲಿಯ ಜನಪದ ನಿವಾಸಗಳಲ್ಲಿ ಕುಳ್ಳುಗೋಡೆ, ಆದರೆ ಎತ್ತರದ ಬಹು ಇಳಿಜಾರಾಗಿರುವ ಚಾವಣಿ ಕಂಡುಬರುತ್ತದೆ. ಈ ಚಾವಣಿಯ ಸೂರು ಗೋಡೆಗಳಿಗಿಂತ ಹೆಚ್ಚು ಮುಂಚಾಚಿರುವಂತೆ ಇರುತ್ತದೆ. ಗೋಡೆಗೆ ಮಣ್ಣು, ಮರ ಅಥವಾ ಬಿದಿರಿನ ತಡಿಕೆ ಉಪಯೋಗಿಸಿದರೆ ಚಾವಣಿ ಬಿದಿರಿನ ಹಂದರ ಮೇಲೆ, ಹುಲ್ಲು, ಜೊಂಡು ಅಥವಾ ತೆಂಗಿನ ಗರಿಗಳಿಂದ ಮುಚ್ಚಿ ಮಾಡಿದ್ದಾಗಿರುತ್ತದೆ. ಈ ಪ್ರದೇಶದ ಗೃಹಗಳ ತಳವಿನ್ಯಾಸ ಆಯವಾಗಿದ್ದರೂ ನಾಲ್ಕು ಹಾರಿನ ಚಾವಣಿ ಇಲ್ಲಿಯ ವೈಶಿಷ್ಟ್ಯ. ಇವುಗಳಲ್ಲಿ ಎರಡು ಹಾರುಗಳು ಆಯಾಕಾರವಾಗಿದ್ದು ಉದ್ದನೆಯ ಬೆಮ್ಮರದಲ್ಲಿ ಕೂಡಿರುತ್ತವೆ. ಇನ್ನೆರಡು ಹಾರುಗಳು ಬೆಮ್ಮರದಿಂದ ಪಕ್ಕಕೆ ಇಳಿಯುತ್ತ ತ್ರಿಕೊಣಾಕಾರವಾಗಿರುತ್ತವೆ.

	ಕರ್ನಾಟಕದ ಹೆಚ್ಚು ಮಳೆ ಬೀಳುವ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲೂ ಕೇರಳದ ರೀತಿಯ ಕುಳ್ಳು ಗೋಡೆಗಳು ಮತ್ತು ಬಹು ಇಳಿಜಾರಿನ ಎರಡು ಅಥವಾ ನಾಲ್ಕು ಹಾರಿನ ಚಾವಣಿಗಳ ಮನೆಗಳು ಕಂಡುಬರುತ್ತವೆ. ಗೋಡೆಗಳು ಸಾಮಾನ್ಯವಾಗಿ ಮಣ್ಣು ಅಥವಾ ಜಂಬಿಟ್ಟಿಗೆಯವು. ಚಾವಣಿಗಳು (ಇತ್ತೀಚಿನ ಮಂಗಳೂರು ಹೆಂಚಿನವನ್ನು ಗಮನಿಸದೇ ಹೋದಲ್ಲಿ) ವಿಶೇಷತಃ ಬಿದಿರು ಅಥವಾ ಮರದ ಜಂತಿ ಹಂದರದ ಮೇಲೆ ಮುಚ್ಚಿದ ಹುಲ್ಲು, ಗರಿ ಮುಂತಾದವುಗಳಿಂದ ಮಾಡಿದವು. ಇಲ್ಲಿಯ ಮನೆಗಳಲ್ಲಿ ಇದ್ದಿಲು ಮುಂತಾದ ಸಾಮಾಗ್ರಿಗಳನ್ನು ಬೆರೆಸಿ ಅರೆದು ಮಾಡಿದ ನಯಗಾರೆಯನ್ನು ನೆಲ ಮತ್ತು ಗೋಡೆಯ ಕೆಲಮಟ್ಟಗಳಿಗೆ ಹಚ್ಚುವ ರೂಢಿ ಇದೆ. ಕೆಂಪು ಕಾರಣೆಯ ಸರಳ ಅಲಂಕರಣವೂ ಉಂಟು. ಮನೆಗಳ ಮುಂದೆ ಹೆಬ್ಬಾಗಿಲ ಇಕ್ಕೆಲದಲ್ಲಿ, ಜಗಲಿ, ಒಳಗೆ ಹಜಾರ ಮತ್ತು ವಿವಿಧ ಗೃಹ ಉದ್ದೇಶಗಳಿಗಾಗಿ ಬಳಸಲು ಬೇರೆ ಬೇರೆ ಕೋಣೆಗಳಿರುತ್ತವೆ. ಬಹು ಸರಳವಾದ ಗುಡಿಸಲುಗಳು ಆಕಾರದಲ್ಲಿ ಸುಮಾರು ಇದೇ ರೀತಿಯಿದ್ದರೂ ಒಳ ಆವರಣದಲ್ಲಿ ಹೆಚ್ಚು ವಿಂಗಡಣೆಗಳಿರುವುದಿಲ್ಲ.	

ಉತ್ತರ ಕರ್ನಾಟಕದ ಬಯಲು ಪ್ರದೇಶ, ಹಾಗೂ ದಕ್ಷಿಣ ಕರ್ನಾಟಕದ ಮಳೆ ಕಡಿಮೆ ಇರುವ ಚಿತ್ರದುರ್ಗ, ಕೋಲಾರ, ತುಮಕೂರು, ಬೆಂಗಳೂರು ಜಿಲ್ಲೆಗಳು ಮತ್ತು ಸುತ್ತಲ ಪ್ರದೇಶಗಳಲ್ಲಿ ಆಯಾಕಾರದ ಮಾಳಿಗೆ ಮನೆಗಳು ವಿಶೇಷ. ಇವುಗಳ ಗೋಡೆಗಳು ಬಹು ಮಟ್ಟಿಗೆ ಮಣ್ಣಿನವು. ಕಲ್ಲು ವಿಶೇಷವಾಗಿ ದೊರಕುವ ಕೆಲವೆಡೆಗಳಲ್ಲಿ ಕಲ್ಲುಚೂರುಗಳನ್ನು ಜೋಡಿಸಿ ಮಾಡಿದ ಗೋಡೆಗಳೂ ಇರುತ್ತವೆ. ಹೆಬ್ಬಾಗಿಲು ಕಿರಿದು ಮತ್ತು ಕುಳ್ಳು. ಒಳಭಾಗದಲ್ಲಿ ಆವಶ್ಯಕತೆಗೆ ತಕ್ಕಂತೆ ಕೋಣೆಗಳೂ ಹಜಾರವೂ ಇರುತ್ತವೆ. ಗೋಡೆಗಳ ಮೇಲೆ ತೊಲೆ ಮತ್ತು ಅಡ್ಡಜಂತಿಗಳನ್ನು ಇಟ್ಟು ಹಂದರ ಮಾಡಿ, ಮೇಲೆ ಕಡ್ಡಿ, ಸೊಪ್ಪುಗಳನ್ನು ಜೋಡಿಸಿ, ಅದರ ಮೇಲೆ ಮಣ್ಣನ್ನು ದಪ್ಪಗೆ ಹರವಿ ಮಾಡಿದ ಚಾವಣಿ ಇರುತ್ತದೆ. ಗೋಡೆಗಳು ಇರುಚಿಲಿನಿಂದ ನೆನೆಯದಂತೆ, ಅವುಗಳ ಮೇಲಂಚಿನಲ್ಲಿ ಮುಂಚಾಚುವ ಲೋವೆ ಕಲ್ಲುಗಳನ್ನೋ ಭೂತಾಳೆ ಪಟ್ಟೆಗಳನ್ನೊ ಜೋಡಿಸಿರುತ್ತಾರೆ. ಮೇಲೆ ಹರವಿದ ಮಣ್ಣು ಮಳೆಯಿಂದ ಕೊಚ್ಚಿಹೋಗದಂತಿರಲೂ, ಬಿದ್ದ ನೀರು ಕಟ್ಟಡಕ್ಕೆ ಅಪಾಯವಾಗದಂತೆ ಒಂದೆಡೆಯಿಂದ ಹರಿದು ಹೋಗಲೂ ಸುತ್ತಂಚಿನಲ್ಲಿ ಮಣ್ಣು ದಿಂಡನ್ನೂ, ಅಲ್ಲಲ್ಲಿ ಸುಟ್ಟ ಮಣ್ಣಿನ ದೋಣಿಗಳನ್ನೂ ಒದಗಿಸಿರುತ್ತಾರೆ. ಈ ಕಟ್ಟಡಗಳಿಗೆ ಕಿಟಕಿಗಳಿರುವುದಿಲ್ಲವಾದರೂ ಇದಕ್ಕೆ ಅಪವಾದಗಳು ಇಲ್ಲದಿಲ್ಲ. ಮನೆಗಳಿಗೆ ಮಣ್ಣುಗಾರೆ, ಸುಣ್ಣ, ಕಾರಣೆಯ ಪರಿಷ್ಕರಣವಿರುತ್ತದೆ. ಕೋಲಾರ, ಬೆಂಗಳೂರು ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಗ್ರಾನೈಟ್ ಚಪ್ಪಡಿಗಳು ಬಹುವಾಗಿ ದೊರಕುವುದರಿಂದ ಇಲ್ಲಿಯ ಮಾಳಿಗೆ ಮನೆಗಳಲ್ಲಿ ಮಣ್ಣಿನ ಬದಲು ಈ ಕಲ್ಲಿನ ಉಪಯೋಗವೇ ಹೆಚ್ಚು. ಮೊದಲು ಕಲ್ಲಿನ ಕಂಬಗಳನ್ನು ನೆಟ್ಟು ಅದೇ ಕಲ್ಲಿನ ತೊಲೆಗಳನ್ನು ಜೋಡಿಸಿ, ಮೇಲೆ ಚಪ್ಪಡಿಗಳನ್ನು ಹಾಸುವ ಪದ್ದತಿ ಇಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಮಳೆ ಕಡಿಮೆ ಬೀಳುವ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಮಾಳಿಗೆ ಮನೆಗಳಲ್ಲದೆ ವೃತ್ತಾಕಾರದ ತಳವಿನ್ಯಾಸವಿರುವ ಮನೆಗಳೂ ಇವೆ. ಇವು ವಿಶೇಷವಾಗಿ ಒಂದೇ ಕೋಣೆಯ ಮನೆಗಳು. ಗೋಡೆ ಮಣ್ಣಿನದು, ಮೇಲೆ ಬಿದಿರಿನ ಅಥವಾ ಕಡ್ಡಿಗಳ ಹಂದರದ ಮೇಲೆ ಹುಲ್ಲು ಮುಚ್ಚಿದ ಶಂಕುತಲೆಯಾಕಾರದ ಚಾವಣಿ ಇರುತ್ತದೆ.	

ದಕ್ಷಿಣ ಕರ್ನಾಟಕದ ದಕ್ಷಿಣ ಜಿಲ್ಲೆಗಳಲ್ಲಿರುವ ಜನಪದ ನಿವಾಸಗಳು ಸಾಮಾನ್ಯವಾಗಿ ಆಯಾಕಾರದ ಮಣ್ಣು ಗೋಡೆಯ ಮನೆಗಳು. ಇವುಗಳಲ್ಲೂ ಮುಂದೆ ಬಾಗಿಲಿನ ಇಕ್ಕೆಲಗಳಲ್ಲಿ ಜಗಲಿ, ಒಳಗೆ ಹಜಾರ ಮತ್ತು ಅನೇಕ ಕೋಣೆಗಳಿರುತ್ತವೆ. ದೊಡ್ಡ ಮನೆಗಳಲ್ಲಿ ಪುಟದ ಗೋಡೆ ಮಣ್ಣಿನ ದಪ್ಪ ಉಂಡೆಗಳನ್ನು 'ಮಿದ್ದೆ ಎಂದೂ ಕರೆಯುತ್ತಾರೆ. ಈ ಮಿದ್ದೆಗಳನ್ನೇ (ಮುದ್ದೆ) ಒಂದರ ಮೇಲೊಂದು ಸಾಲಾಗಿ ಇಟ್ಟು ಗೋಡೆ ಕಟ್ಟಿ ರಚಿಸಿದ ಮನೆಗಳಿಗೆ 'ಮಿದ್ದೆ ಮನೆ ಎಂದೂ ಮೇಲು ಮುದ್ದೆ ಮಾಳಿಗೆ ಮನೆ ಎಂದೂ ಕರೆಯುವುದುಂಟು. (ಅಂದರೆ ಕಲಸಿದ ಮಣ್ಣಿನ ದಪ್ಪ ಉಂಡೆಗಳನ್ನು ಒಂದರ ಮೇಲೊಂದು ಪೇರಿಸಿ ಎತ್ತಿದ ಗೋಡೆ) ಸಾಮಾನ್ಯ. ಬಹು ಎತ್ತರವಾದ ಗೋಡೆಗಳ ಆವಶ್ಯಕತೆ ಇದ್ದಾಗ, ಅಥವಾ ಚಿಕ್ಕ ಮನೆಗಳನ್ನು ಕಟ್ಟುವಾಗ ತಡಿಕೆ ಗೋಡೆಯನ್ನು ಅಂದರೆ ಬಿದಿರಿನ ಕಂಬಗಳಿಗೆ ಬಿಗಿದ ಬಿದಿರು ದಬ್ಬೆಗಳ ಹಂದರದ ಮೇಲೆ ಕಲಸಿದ ಮಣ್ಣನ್ನು ಮೆತ್ತಿ ಮಾಡಿದ ತೆಳುಗೋಡೆಯನ್ನು ಅಳವಡಿಸುವುದುಂಟು. ಮನೆಗಳ ಚಾವಣಿ ಸಾಮಾನ್ಯವಾಗಿ ಇಪ್ಪಾರು. ಪಕ್ಕದ ಗೋಡೆಗಳ ಎತ್ತರದ ಭಾಗದಲ್ಲಿ ಒಂದು ಬೆಮ್ಮರವನ್ನು ಇಟ್ಟು, ಹಾರು ಎರಡೂ ಕಡೆ ಇಳಿಜಾರಾಗಿರುವಂತೆ ಮಾಡಲಾಗಿರುತ್ತದೆ. ಈ ಹಾರುಗಳು ಬೊಂಬು, ಗಳುಗಳಿಂದ ಆದ ಹಂದರಗಳು. ಮೇಲೆ ತೆಂಗಿನ ಗರಿಯಿಂದ ಹೆಣೆದ ಮಟ್ಟಾಳೆಯನ್ನು ಅಥವಾ ಮಣ್ಣಿನ ಅರೆಕೊಳವೆ ಆಕೃತಿಯ ನಾಡ ಹೆಂಚುಗಳನ್ನು ಮುಚ್ಚಲು ಉಪಯೋಗಿಸಲಾಗುತ್ತದೆ. ಕೆಲವೆಡೆ ಸೋಗೆ ಮತ್ತು ಹುಲ್ಲನ್ನೂ ಬಳಸುವುದುಂಟು. ಮಣ್ಣಿನ ತಡಿಕೆ ಅಥವಾ ಪುಟದ ಗೋಡೆಗಳನ್ನು ಆಯಾಕಾರದ ಕಟ್ಟಿ ಒಂದು ಗೋಡೆಯನ್ನು ಎತ್ತರಕ್ಕೆ ಮಾಡಿ, ಅದಕ್ಕೆ ಸಮಕೋನದಲ್ಲಿರುವ ಗೋಡೆಗಳನ್ನು ಇಳಿಜಾರಾಗಿರುವಂತೆ ರೂಪಿಸಿ ಇದರ ಮೇಲಿನ ಚಾವಣಿ ಒಂದೆ ಕಡೆಗೆ ಇಳಿಜಾರಾಗಿರುವಂತೆ ಮಾಡಿದ ಒಪ್ಪಾರು ಕಟ್ಟಡಗಳೂ ಅಲ್ಲಲ್ಲಿ ಕಂಡುಬರುತ್ತವೆ. ಆದರೆ ಇಂಥ ಕಟ್ಟಡಗಳನ್ನು ದನ, ಎಮ್ಮೆಗಳನ್ನು ಕಟ್ಟಲು ಉಪಯೋಗಿಸುವುದೇ ಹೆಚ್ಚು. ಒಂದು ವಿಶಿಷ್ಟ ರೀತಿಯ, ವಿಶೇಷವಾಗಿ ಸ್ವಲ್ಪ ಸ್ಥಿತಿವಂತರಿಗೇ ಸೇರಿದ, ತೊಟ್ಟಿಮನೆಗಳು ಕರ್ನಾಟಕದ ಹಲವೆಡೆಗಳಲ್ಲಿವೆ. ಇವು ರಚನಾ ವಿಧಾನದಲ್ಲಿ ಇತರವಂತೆಯೇ ಇದ್ದರೂ ವಿನ್ಯಾಸ ಮಾತ್ರ ಸ್ವಲ್ಪ ವ್ಯತ್ಯಾಸವಾಗಿರುತ್ತದೆ. ಇವುಗಳಲ್ಲಿ ಆಯ ಅಥವಾ ಚೌಕ ತಳವಿನ್ಯಾಸವಿದ್ದು ಮಧ್ಯೆ ಒಂದು ತೆರೆದ (ಮುಚ್ಚು ಇಲ್ಲದ) ತೊಟ್ಟಿ ಇರುತ್ತದೆ. ತೊಟ್ಟಿಯ ಸುತ್ತಲೂ ಪಡಸಾಲೆ, ಅದರ ಸುತ್ತಲೂ ಕೋಣೆಗಳನ್ನು ವ್ಯವಸ್ಥೆ ಮಾಡಲಾಗಿರುತ್ತದೆ. ಮುಂದೆ ಮುಂಬಾಗಿಲಿನ ಇಕ್ಕೆಲಗಳಲ್ಲಿ ಜಗಲಿಗಳಿರುತ್ತವೆ. ಈ ತೊಟ್ಟಿ ಮನೆಗಳು ವಿಶಾಲವಾಗಿದ್ದು, ಒಂದು, ಎರಡು ಅಥವಾ ಮೂರು ಅಂಕಣಗಳ ತೊಟ್ಟಿ ಮನೆಗಳು ಇತ್ಯಾದಿಯಾಗಿ ವಿವಿಧ ಪರಿಮಾಣಗಳಿರುತ್ತವೆ.

	ಕರ್ನಾಟಕದ ಜನಪದ ವಾಸ್ತು ರಚನೆಗಳಲ್ಲಿ ವಾಸಗೃಹಗಳ ಜೊತೆಗೆ ದೇವಾಲಯಗಳೂ ಕಂಡುಬರುತ್ತವೆ. ಇವು ಶ್ರೀಮಂತ ಸಮಾಜಗಳಿಂದ ಪ್ರೋತ್ಸಾಹಿತವಾದ ರಚನೆಗಳಂತೆ ವಿಶಿಷ್ಟ ರೀತಿಯವುಗಳಲ್ಲ. ಸಾಮಾನ್ಯವಾಗಿ ಬಹು ಚಿಕ್ಕ ಏಕಕೋಣೆಯ ಕಟ್ಟಡಗಳು. ರಚನಾತಂತ್ರ ವಾಸಗೃಹಗಳಂತೆಯೇ. ಕೆಲವು ಗ್ರಾಮಗಳಲ್ಲಿ ಅತಿ ಕುಳ್ಳಾದ, ಕೇವಲ 3-4 ಅಡಿ ಎತ್ತರದ, ಮೂರು ಕಡೆ ಮಾತ್ರ ಗೋಡೆಗಳಿದ್ದು ಮಟ್ಟ ಚಾವಣಿಯಿಂದ ಮುಚ್ಚಿದ ಆಯಾಕಾರದ ಕಿರು ಗುಡಿಗಳು ಕಂಡುಬರುತ್ತವೆ.

	ಊರಿನ ಜನ ಕೆಲವೊಂದು ಸಾಮಾಜಿಕ ವ್ಯವಹಾರಗಳಿಗಾಗಿ ಸಭೆ ಸೇರಲು, ಕೆಲವು ಬಾರಿ ಹೊರಗಿನಿಂದ ಬಂದವರಿಗೆ ತಂಗುದಾಣವಾಗಿರಲು, ಮತ್ತಿತರ ಸಾರ್ವಜನಿಕ ಕಾರ್ಯಗಳಿಗೆ ಉಪಯೋಗವಾಗಲು ಹಳ್ಳಿಗೊಂದು ಚಾವಡಿ ಇರುತ್ತದೆ. ಇವು ಸಾಮಾನ್ಯವಾಗಿ ಮೂರು ಕಡೆ ಗೋಡೆ ಇದ್ದು ಮುಂಭಾಗ ತೆರೆದಂತಿರುವ ಕಟ್ಟಡಗಳು. ಗ್ರಾಮದ ಆವಶ್ಯಕತೆ, ಆರ್ಥಿಕ ಸ್ಥಿತಿ ಇತ್ಯಾದಿಗಳಿಗೆ ಅನುಗುಣವಾಗಿ ಇವು ಹಲವು ಅಂಕಣಗಳಷ್ಟು ಅಗಲವಾಗಿರುತ್ತವೆ.	

ಗ್ರಾಮಗಳಲ್ಲಿ ಕಂಡು ಬರುವ ಇನ್ನೊಂದು ರೀತಿಯ ಕಟ್ಟಡ, ಗರಡಿ (ನೋಡಿ- ಗರಡಿ). ಗ್ರಾಮೀಣರ ಕಸರತ್ತಿಗಾಗಿ ನಿರ್ಮಿತವಾಗಿರುವ ಈ ಗರಡಿಮನೆಗಳಲ್ಲಿ ಒಂದು ಹಜಾರ ಮಾತ್ರ ಇರುತ್ತದೆ. ಆಯಾ ಪ್ರದೇಶದ ರೂಢಿಯಂತೆ ಮಾಳಿಗೆ ಚಾವಣಿಯೋ, ಒಪ್ಪರು, ಇಪ್ಪಾರು ಚಾವಣಿಯೋ ಇರುತ್ತದೆ. ಕಿಟಕಿಗಳು ಇಲ್ಲದಿರುವುದು, ಅತಿ ಕುಳ್ಳಾದ ಬಾಗಿಲು ಇವುಗಳ ವೈಶಿಷ್ಟ್ಯ. ತೊಟ್ಟಿ ಮನೆಗಳಂತೆ, ಉತ್ತರ ಕರ್ನಾಟಕದಲ್ಲಿನ ದಂದಕ್ಕೆ ಮನೆಗಳು, ವಾಡೆಗಳು, ಕರಾವಳಿ ಭಾಗದ ಗುತ್ತಿನ ಮನೆಗಳು, ಬುಡಕಟ್ಟಿನವರ, ಗೃಹವಿಶೇಷಗಳು, ಮರದ ಮೇಲಿನ 'ಮನೆಗಳು ಕೃಷಿಕರು ಬೆಳೆಗಳ ರಕ್ಷಣೆಗಾಗಿ ಅಟ್ಟದ ಮೇಲೆ ಕಟ್ಟಿಕೊಳ್ಳುವ ಗುಡಿಸಲುಗಳು, ಅಲೆಮಾರಿಗಳ ಗುಡಾರಗಳು, ಗೊಲ್ಲರ ಸೂತಕದ ಗುಡಿಸಲುಗಳು, ದೇವರ 'ಗುಬ್ಬಗಳು ಇವೆ. ಕುಲಪಂಚಾಯಿತಿ ನಡೆಸುವ 'ಕಟ್ಟೆಮನೆ ಗಳು ಇವೆ. (ಮಾನವಿಕ ಕರ್ನಾಟಕ 25-26:1ರಿಂದ 8 ಸಂಚಿಕೆ, 1996) ನೋಡಬಹುದು.										 	 	(ಎಸ್.ಎನ್)
										(ಟಿ. ಗೋವಿಂದರಾಜು)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ